ಅಗ್ರವಾರ್ತೆ

 ವೃತ್ತಪತ್ರಿಕೆಯಲ್ಲಿ ಪ್ರಕಟವಾಗುವ ನಾನಾರೀತಿಯ ಸುದ್ದಿ ಸಮಾಚಾರಗಳಲ್ಲಿ ಅತಿಮುಖ್ಯವಾದುದು. ಸಾಮಾನ್ಯವಾಗಿ ಪತ್ರಿಕೆಯ ಮೊದಲ ಪುಟದ ಮೊದಲ ಸಾಲಿನಲ್ಲೆ ಅತಿ ದೊಡ್ಡ ಅಕ್ಷರಗಳಲ್ಲಿ ಅಚ್ಚುಗೊಳ್ಳುವ ಯೋಗ್ಯತೆಯುಳ್ಳದ್ದು. ಇದನ್ನು ನಿಶ್ಚಯ ಮಾಡಬೇಕಾದರೆ ಸುದ್ದಿಯ ಮೌಲ್ಯವೊಂದನ್ನೆ ಅಲ್ಲ, ವಾಚಕರ ಆತುರ, ಅಪೇಕ್ಷೆ, ಮನೋಧರ್ಮ, ಆತಂಕ, ಕ್ಷೇಮ ಇವುಗಳನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳಬೇಕು. ನಿಷ್ಕಾರಣವಾಗಿ ಜನತೆಯ ಚಿತ್ತಸ್ವಾಸ್ಥ್ಯವನ್ನು ಕೆಡಿಸಿ ಗುಲ್ಲೆಬ್ಬಿಸುವ ವಾರ್ತೆ ಎಷ್ಟೇ ಕೌತುಕಕಾರಿಯಾಗಿರಲಿ ಅದು ಪತ್ರಿಕೆಯ ಅಗ್ರವಾರ್ತೆಯಾಗಬಾರದು. ಪತ್ರಿಕೆ ಜನತೆಯನ್ನು ಸನ್ಮಾರ್ಗದಲ್ಲಿ ನಡೆಸುವ ಕೈದೀವಿಗೆ, ಹಿತವನ್ನು ರಕ್ಷಿಸುವ ಕಾವಲುನಾಯಿ ಎಂಬ ಮಾತು ಸದಾ ನೆನಪಿನಲ್ಲಿರಬೇಕು. ಒಂದೆರಡು ದಿನಗಳ ಅಥವಾ ತಿಂಗಳ ಅಭ್ಯಾಸದಿಂದ ಲೇಖಕನಿಗೆ ಈ ಶಕ್ತಿ ಲಭ್ಯವಾಗುವುದಿಲ್ಲ; ಆ ವೃತ್ತಿಯ ದೀರ್ಘಕಾಲದ ಅನುಭವದಿಂದ ಇದಕ್ಕೆ ಬೇಕಾದೊಂದು ಅಪೂರ್ವಶಕ್ತಿ ಕೈಗೂಡುತ್ತದೆ.

 ಅಗ್ರವಾರ್ತಾನಿರೂಪಣೆಯಲ್ಲಿ ಬಳಸುವ ಪ್ರತಿಯೊಂದು ಮಾತಿನಲ್ಲೂ ರಚಿಸುವ ಒಂದೊಂದು ವಾಕ್ಯದ ಸರಳತೆಯಲ್ಲೂ ಎಲ್ಲಕ್ಕಿಂತ ಹೆಚ್ಚಾಗಿ ತೋರಿಸುವ ಪ್ರಾಮಾಣಿಕತೆಯಲ್ಲೂ ಆ ಸಮಾಚಾರದ ಬೆಲೆ ಅಡಗಿರುತ್ತದೆ. ಅನಂತರ ಒಟ್ಟು ರಚನೆಗೆ ಒಂದು ಹೆಸರನ್ನೂ ಕೊಡಬೇಕು. ಇದು ಮೂಲರಚನೆಗಿಂತಲೂ ಕಷ್ಟವಾದ ಕೆಲಸ. ಅಗ್ರವಾರ್ತೆಯನ್ನು ವಾಚಕರು ಓದುವಾಗ, ಅವರ ಮನಸ್ಸಿನ ಮೇಲಾಗಬಹುದಾದ ಒಳಿತಿಗಿಂತ ಹೆಚ್ಚಾಗಿ ವಿಪತ್ತಿನ ಪ್ರಜ್ಞೆ ಬರೆಯುವ ಸಂಪಾದಕನಿಗೆ ಇರಬೇಕು. ಇಂಥ ವಿಪತ್ತಿನಿಂದ ಸಮಾಜ ಸುರಕ್ಷಿತವಾಗಿರಬೇಕು. ಸದುದ್ದೇಶ ಉಳ್ಳವರ ಮೂಲಕವಾಗಿ ಬಂದ ಬರೆಹದಿಂದ ದುಷ್ಟಜನ ಶಿಕ್ಷೆ, ಶಿಷ್ಟಜನ ಸಂರಕ್ಷಣೆ, ಇವೆರಡೂ ಆಗುತ್ತದೆ. ಮನೋವಿಜ್ಞಾನದಲ್ಲಿ ಕೊಂಚ ಪಳಗಿದವನಾಗಿ, ಉದಾರಿಯೂ ನಿರ್ಮಲನೂ ಆಗಿದ್ದರೆ ಲೇಖಕ ಬಳಸುವ ಮಾತು ಸಹಜವಾಗಿ ಸಾಧುವೂ ಸೂಟಿಯೂ ಆಗಿರುತ್ತದೆ; ಗಂಭೀರ ಮಾತ್ರವಲ್ಲ, ಪವಿತ್ರತೆಯ ಪ್ರಭೆಯಿಂದ ಬೆಳಗುತ್ತಿರುತ್ತದೆ. ಪತ್ರಿಕಾವಾಚಕನಿಗೆ ಆಸಕ್ತಿ ಇಲ್ಲದ ಸಮಾಚಾರವೇ ಇಲ್ಲ. ಆದಕಾರಣ ಈ ಆಸಕ್ತಿಗೆ ಒಳ್ಳೆ ಸಂಸ್ಕಾರ ಕೊಡುವ ಸಾರ್ಥಕ ಶಬ್ದಗಳನ್ನು ಲೇಖಕ ಬಳಸಬೇಕು; ಒಳ್ಳೆ ಸಂಯಮವನ್ನು ಕೊಡುವ ಸಾತ್ತ್ವಿಕ ಶೈಲಿಯನ್ನು ಆಶ್ರಯಿಸಬೇಕು. ಆಗ ಅಗ್ರವಾರ್ತೆಯ ಪೂರ್ಣ ಪ್ರಯೋಜನ ದೊರಕಿದಂತಾಗುತ್ತದೆ.      

(ಟಿ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ